ವೀರೇಂದ್ರ ಹೆಗ್ಗಡೆ 
1948-. ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ. ಸರದಿಯಲ್ಲಿ ಇವರು ಧರ್ಮಸ್ಥಳ ದೇಗುಲದ 21ನೆಯ ಮೊಕ್ತೇಸರರು. 1948 ನವೆಂಬರ್ 25ರಂದು ಧರ್ಮಸ್ಥಳದಲ್ಲಿ ಜನಿಸಿದರು. ತಂದೆ ರತ್ನವರ್ಮ ಹೆಗ್ಗಡೆ, ತಾಯಿ ರತ್ನಮ್ಮ ಹೆಗ್ಗಡಿತಿ. 

	ಧರ್ಮಸ್ಥಳ, ಉಜಿರೆ, ಬೆಂಗಳೂರುಗಳಲ್ಲಿ ಶಿಕ್ಷಣ ಪಡೆದು ಪದವೀಧರರಾದರು. ತಂದೆಯವರು ನಿಧನರಾದಾಗ ತಮ್ಮ 20ನೆಯ ವಯಸ್ಸಿನಲ್ಲಿ ಧರ್ಮಾಧಿಕಾರಿ ಪಟ್ಟ ವಹಿಸಿಕೊಂಡರು. ಇವರ ಹಿರಿತನದಲ್ಲಿ ಶ್ರೀಕ್ಷೇತ್ರದ ಪಾರಂಪರಿಕ ಆಚರಣೆಗಳು ಮುಂದುವರಿಯುವುದರ ಜೊತೆಗೆ ಕ್ಷೇತ್ರದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮುಂತಾಗಿ ಮಾನವ ಸೇವೆಗೆ ಹಲವು ಮಗ್ಗುಲುಗಳು ಸೇರಿಕೊಂಡವು. ಏಕಕಾಲಕ್ಕೆ ಮೂರು ಸಾವಿರ ಜನರಿಗೆ ಊಟಬಡಿಸುವ ಅನ್ನಪೂರ್ಣ ಊಟದ ಮಂದಿರ, ಕ್ಷೇತ್ರಕ್ಕೆ ಬರುವ ಪ್ರವಾಸಿಗರ ವಸತಿಗಾಗಿ ನೇತ್ರಾವತಿ, ವೈಶಾಲಿ, ಶರಾವತಿ, ಗಾಯತ್ರೀ, ಗಂಗೋತ್ರಿ, ಸಾಕೇತ, ಸನ್ನಿಧಿ ಅತಿಥಿಗೃಹಗಳು ನಿರ್ಮಾಣಗೊಂಡವು. ಇವರ ತಂದೆಯವರ ಆಶಯದಂತೆ ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿಸ್ಥಾಪನೆ ಕಾರ್ಕಳದ ರಂಜಾಳ ಗೋಪಾಲ ಶೆಣೈಯವರ (ನೋಡಿ) ಮುಂದಾಳತ್ತ್ವದಲ್ಲಿ 1982ರಲ್ಲಿ ರತ್ನಗಿರಿ ಬೆಟ್ಟದ ಮೇಲೆ ಇವರ ಹಿರಿತನದಲ್ಲಿ ನಡೆಯಿತು. 

	ಇವರು ಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹದಂಥ ಕ್ರಾಂತಿಕಾರ ಕಾರ್ಯಕ್ರಮವನ್ನು  ಆರಂಭಿಸಿದರು(1972). ಧರ್ಮಸ್ಥಳದಲ್ಲಿ 2001ರ ವರೆಗೆ ಸಾಮೂಹಿಕ ವಿವಾಹದಲ್ಲಿ 9,198 ಜೋಡಿಗಳು ಸತಿಪತಿಗಳಾಗಿದ್ದಾರೆ.  

	ಛಾಯಾಗ್ರಹಣ, ಪುರಾತನ ವಸ್ತುಗಳ ಸಂಗ್ರಹ ಇವರ ಪ್ರಿಯ ಹವ್ಯಾಸ. ಧರ್ಮಸ್ಥಳದ ಬೃಹತ್ ವಸ್ತುಸಂಗ್ರಹಾಲಯ ಮಂಜೂಷಾ ಇವರ ಕನಸಿನ ಕೂಸು. ಮಂಜುನಾಥೇಶ್ವರ ಸಂಸ್ಕøತಿ ಸಂಶೋಧನ ಪ್ರತಿಷ್ಠಾನ, ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ, ಮಂಜುವಾಣಿ ಮಾಸಪತ್ರಿಕೆ ಇವರ ಆಸಕ್ತಿಯ ಕುರುಹುಗಳು. 

	ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಮುದಾಯ ಅಭಿವೃದ್ಧಿ ಯೋಜನೆಗಳು ಇವರ ದೂರದರ್ಶಿತ್ತ್ವದ ಉದಾಹರಣೆಗಳು. 1982ರಲ್ಲಿ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಇವರು ಈ ಯೋಜನೆಯನ್ನು ಪ್ರಕಟಿಸಿದರು. ಬೆಳ್ತಂಗಡಿ ತಾಲ್ಲೂಕನ್ನು ಕೇಂದ್ರವಾಗಿಟ್ಟು ಕೊಂಡು ಅಲ್ಲಿಯ 24 ಸಾವಿರ ಬಡಕುಟುಂಬಗಳ ಸರ್ವಾಂಗೀಣ ಅಭಿವೃದ್ಧಿ, ಗ್ರಾಮಾಭಿವೃದ್ಧಿ ಈ ಯೋಜನೆಯ ಗುರಿ. ಬಡರೈತ ಬೇರೆಕಡೆ ಕೂಲಿಗೆ ಹೋಗದೇ ತನ್ನ ಹೊಲದಲ್ಲಿ ದುಡಿಯಬೇಕು. ಹಾಗೆ ದುಡಿದ ದಿನದ ಅನ್ನ-ಉಪ್ಪಿನ ಖರ್ಚನ್ನು ಯೋಜನೆ ನಿಭಾಯಿಸುತ್ತದೆ ಎಂಬ ತತ್ತ್ವದ ಮೇಲೆ ಬಡರೈತರು, ಕೂಲಿಕಾರರು ಸ್ವಅಭಿವೃದ್ಧಿಯತ್ತ ಹೆಜ್ಜೆ ಇಡಲು ಇವರು ರೂಪಿಸಿದ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಯಿತು. ಫಲಾನುಭವಿಗಳಿಗೆ ಹಣ ನೀಡದೇ ವಸ್ತುಗಳ ರೂಪದಲ್ಲಿ ಅನುದಾನ ನೀಡುವ ಪದ್ಧತಿಯನ್ನು ಯೋಜನೆ ಆರಂಭಿಸಿತು. ಪ್ರಗತಿಬಂಧು ಎಂಬ ಸ್ವಸಹಾಯ ಗುಂಪುಗಳನ್ನು ರಚಿಸಿ ರೈತರ, ಕೂಲಿಕಾರರ ಅರ್ಥಿಕಾಭಿವೃದ್ಧಿಗೆ ಒತ್ತುನೀಡಿತು. ಈಗ ಜರ್ಮನಿ, ಮಲೇಷಿಯ, ನೇಪಾಲ, ಕೆನಡ, ಶ್ರೀಲಂಕಾ ಮುಂತಾದ ದೇಶಗಳಿಂದಲೂ ಪರಿಣತರು ಬಂದು ಈ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ವಿಧಾನವನ್ನು ಅಭ್ಯಸಿಸುತ್ತಿದ್ದಾರೆ. 

	ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆ ಸಮುದಾಯ ಅಭಿವೃದ್ಧಿ ಯೋಜನೆ. ಬೆಳ್ತಂಗಡಿ ತಾಲ್ಲೂಕಿನ ಹೊರಕ್ಕೆ ರಾಜ್ಯದ 11 ಜಿಲ್ಲೆಗಳಲ್ಲಿ ಸಾರ್ವಜನಿಕರ ಹಾಗೂ ಸರ್ಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಂಸ್ಥೆ. ಶಾಲೆ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣ, ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತ ಕಟ್ಟಡಗಳ ನಿರ್ಮಾಣ, ನೀರು ಸರಬರಾಜು ಯೋಜನೆ, ಸಂಪರ್ಕ ರಸ್ತೆ, ಶಾಲಾ ಮೈದಾನ ರಚನೆ, ಅರಣ್ಯಾಭಿವೃದ್ಧಿ ಮುಂತಾಗಿ ಜನೋಪಯೋಗಿ ಕಾಮಗಾರಿಗಳನ್ನು ಈ ಯೋಜನೆ ಕೈಗೊಂಡಿದೆ. ಹಿಂದು ರುದ್ರಭೂಮಿಗಳ ಅಭಿವೃದ್ಧಿ ಯೋಜನೆಯಡಿ ರಾಜ್ಯದ 115 ರುದ್ರಭೂಮಿಗಳ ಅಭಿವೃದ್ಧಿಗೆ ಈವರೆಗೆ ಒಂದು ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ. 

	ಧರ್ಮೋತ್ಥಾನ ಟ್ರಸ್ಟ್ ಇವರು ಅಧ್ಯಕ್ಷರಾಗಿರುವ ಮತ್ತೊಂದು ಸಂಸ್ಥೆ. ಸಾಂಸ್ಕøತಿಕ ಮಹತ್ತ್ವದ ಪ್ರಾಚೀನ ದೇವಾಲಯಗಳ ಪುನರುಜ್ಜೀವನ ಈ ಟ್ರಸ್ಟಿನ ಧ್ಯೇಯ. ಇದುವರೆಗೆ 22 ದೇಗುಲಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ. ಈ ಯೋಜನೆಯ ಮಹತ್ತ್ವವನ್ನು ಮನಗಂಡ ಕರ್ನಾಟಕ ಸರ್ಕಾರ ಈ ಟ್ರಿಸ್ಟಿನ ಜೊತೆ ಕೈಜೋಡಿಸಲು ಮುಂದೆ ಬಂದಿದೆ. 

	ಆರೋಗ್ಯ ಹಾಗೂ ಶೈಕ್ಷಣಿಕ ರಂಗದಲ್ಲೂ ಇವರ ಸೇವೆ ಗಮನಾರ್ಹ. ಸಂಚಾರಿ ಆಸ್ಪತ್ರೆ, ಕ್ಷಯರೋಗ ಆಸ್ಪತ್ರೆ, ಮಂಜುಶ್ರೀ ಕಣ್ಣಿನ ಆಸ್ಪತ್ರೆ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ, ದಂತವೈದ್ಯ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಈಗ ಧಾರವಾಡದಲ್ಲಿ ಕಟ್ಟಲಾಗು ತ್ತಿರುವ ಬೃಹತ್ ವೈದಕೀಯ ಕಾಲೇಜು ಮತ್ತು ಆಸ್ಪತ್ರೆಗಳು, ಎಸ್‍ಡಿಎಂ ಮೆಡಿಕಲ್ ಟ್ರಸ್ಟ್, ಶಾಂತಿವನ ಟ್ರಸ್ಟ್ ಹಾಗೂ ಎಸ್‍ಡಿಎಂ ಎಜುಕೇಶನಲ್ ಟ್ರಸ್ಟ್‍ಗಳ ಮೂಲಕ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಜನತೆಗೆ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿಯ ಆಶ್ರಯದಲ್ಲಿ ಪ್ರಾಥಮಿಕ ಶಾಲೆಯಿಂದ ವೃತ್ತಿಪರ ಕಾಲೇಜುಗಳವರೆಗೆ 28 ಶಿಕ್ಷಣ ಸಂಸ್ಥೆಗಳಿದ್ದು, ಸು. 15 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 

	ಗ್ರಾಮೀಣಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಕೇಂದ್ರ (ರುಡ್‍ಸೆಟ್) ಇವರ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಇನ್ನೊಂದು ಸೇವಾ ಸಂಸ್ಥೆ. ಸಿಂಡಿಕೇಟ್ ಹಾಗೂ ಕೆನರಾ ಬ್ಯಾಂಕ್‍ಗಳೂ ಈ ಸಂಸ್ಥೆಯಲ್ಲಿ ಭಾಗಿಗಳು. ನಿರುದ್ಯೋಗಿ ಯುವಕರಿಗೆ ಸ್ವಉದ್ಯೋಗದ ದೀಕ್ಷೆ ಮತ್ತು ತರಬೇತಿ ನೀಡುವುದು ರುಡ್‍ಸೆಟ್ ಸಂಸ್ಥೆಯ ಉದ್ದೇಶ. ದೇಶದ 17 ಕಡೆಗಳಲ್ಲಿ ಕೇಂದ್ರಗಳನ್ನು ಹೊಂದಿರುವ ರುಡ್‍ಸೆಟ್ ಈವರೆಗೆ 85 ಸಾವಿರ ಯುವಕರಿಗೆ ಸ್ವಉದ್ಯೋಗ ತರಬೇತಿ ನೀಡಿದೆ. 

	ಇವರ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆಗಳಿಗೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1985), ಗ್ರಾಮೀಣಾಭಿವೃದ್ಧಿಗಾಗಿ ಫಿಕ್ಕಿ ಪ್ರಶಸ್ತಿ (1985, 1999), ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್ (1994), ಇಂದಿರಾ ಗಾಂಧೀ ಪ್ರಿಯದರ್ಶಿನಿ ಪ್ರಶಸ್ತಿ (1994), ಭಾರತೀಯ ಸಾರ್ವಜನಿಕ ಸಂಪರ್ಕ ಸಂಸ್ಥೆಯ ವರ್ಷದ ವ್ಯಕ್ತಿ ಪ್ರಶಸ್ತಿ (1994), ಪದ್ಮಭೂಷಣ ಪ್ರಶಸ್ತಿ (2000), ವಾಟಿಕ ವರ್ಷದ ಕನ್ನಡಿಗ ಪ್ರಶಸ್ತಿ (2004) ಮುಖ್ಯವಾದುವು. ಆರೋಹಣ (1978), ರಾಜರ್ಷಿ (1993), ಪ್ರವರ್ಧಮಾನ (1993) - ಇವು ಇವರಿಗೆ ಅರ್ಪಿಸಿರುವ ಅಭಿನಂದನ ಗ್ರಂಥಗಳು. ಹೇಮಾವತಿ ಇವರ ಪತ್ನಿ.											
(ಎನ್.ವಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ